ಅಚ್ಚಗನ್ನಡದ ನುಡಿವಣಿ

ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಅಚ್ಚಗನ್ನಡದ ಕೃತಿ "ನುಡಿವಣಿಗಳು" ಹೊತ್ತಗೆಯಿಂದ ಆಯ್ದ ಕವನಗಳು:
 
ಆವ ಪಾಲ್ಗಡಲ ಪಾಲ್ ಮೊಲೆಗಳೆಲ್ಲವ ತುಂಬಿ
ಹೂ ಜೇನು ಹಣ್ಗಳ ಸೀಯಾಗಿ ಮುಂತೆ
ಬಗೆ ಬಗೆ ಸವಿಯಾಗಿ ಹೊನಲಾಗಿ ಕಾವುದೊ
ಪಾಲ್ಗಡಲದಕೆ ಮಣಿ ಮೊದಲಂತೆ ||1||
1. ಯಾವ ಕ್ಷೀರ ಸಾಗರದ ಹಾಲೇ ಎಲ್ಲಾ ಜೀವಿಗಳ ಮೊಲೆಗಳಲ್ಲಿ ಹಾಲಾಗಿಯೂ, ಹೂಗಳಲ್ಲಿ ಜೇನಾಗಿಯೂ, ಹಣ್ಣುಗಳಲ್ಲಿ ಸಿಹಿಯಾಗಿಯೂ, ನೂರಾರು ಬಗೆಯ ಸವಿಯಾಗಿಯೂ, ಜೀವಿಗಳನ್ನು ರಕ್ಷಿಸುವುದೋ, ಅಂತಹ ಕ್ಷೀರಸಾಗರಕ್ಕೆ ಮೊದಲಾಗಿ ವಂದಿಸುವೆನು.
-------------------------------------------------------------------------------------------------------------------------

ಬಿಡುಗಣ್ಣರೇನೇನೊ ಪಡೆದ ಪಾಲ್ಗಡಲಲ್ಲಿ
ನನ್ನಿಯೊಡೆಯ ಮಲಗಿಹ ನಲವಂತೆ
ತಿಳಿವಿಗೊಪ್ಪಾಗಿ ಬಪ್ಪಾ ಹಸುರೊಡೆಯನಂ
ಮೊರೆಯಿಡುವೆಂ ಪೊರೆ! ಮರೆಯದೆಂಬಂತೆ ||2||


2. ಯಾವ ಕ್ಷೀರಸಾಗರದಿಂದಲೇ ದೇವತೆಗಳು ತಮಗೆ ಬೇಕಾದ ಶ್ರೇಷ್ಠ ವಸ್ತುಗಳನ್ನು ಪಡೆದರೋ, ಅದರಲ್ಲಿಯೇ ಸತ್ಯ ಸ್ವರೂಪನಾದ ಭಗವಂತನು ಮಲಗಿರುವನಂತೆ! ಅದೇ ಅವನ ಆನಂದವಂತೆ. ನಮ್ಮ ಜ್ಞಾನಕ್ಕೆ ತಕ್ಕಂತೆ ಮೈದೋರುವ ಹಸುರಾದ ಮೈಯುಳ್ಳ ಭಗವಂತನನ್ನು ಮರೆಯದೆ ಸಲಹೆಂದು ಪ್ರಾರ್ಥಿಸುವೆನು.
-----------------------------------------------------------------------------------------------------------------------



ತಿಳಿವೆ! ಬೆಳ್ಳಿಯ ಬೆಟ್ಟ, ಹೊತ್ತೆ! ಸುತ್ತಿದ ಹಾವು
ಮೈಯರೆ ವೆಣ್ಣಾಯ್ತು ನೆಲದಳವಂತೆ
 ಸಯ್ಪು ಬಾಂದೊರೆಯಾಗಿ ಹೊತ್ತು ಸಾವಂ ಗೆಲ್ದ
  ಮುಕ್ಕಣ್ಣ ನೊಲ್ಮೆ ಬೀರಲಿ! ಬಾಳುವಂತೆ                         ||3||
3.  ಜ್ಞಾನವೇ ರಜತಗಿರಿಯಾದ ಕಾಲವೆಂಬುದೇ ಸುತ್ತಿಕೊಂಡ ಸರ್ಪವಾದ, ನೆಲದ ಶಕ್ತಿಯೇ ಅರ್ಧಶರೀರವಾದ ಹೆಂಡತಿಯಾದ, ಪುಣ್ಯವೇ ದೇವಗಂಗೆಯಾಗಿರಲು ಅದನ್ನು ಧರಿಸಿ ಮರಣವನ್ನು ಗೆದ್ದಿರುವ ಮೂರು ಕಣ್ಣುಳ್ಳ ಶಿವನು ಏಳಿಗೆ ಹೊಂದುವಂತೆ ದಯೆಯನ್ನು ಬೀರಲಿ.
----------------------------------------------------------------------------------------------------------------------


ಕಣ್ಬಿಟ್ಟು ನಡೆವವಂ ಹೊಳಲ, ಹಳುವ, ಬೆಟ್ಟ
ಕಡಲ, ಕೇರಿಯ, ದೇವಳಗಳ ಕಾಂಬಂತ
ತಿಳಿವಿನ ದಾರಿಗ ಬಗೆಯೊಳೇನೋ ಕಾಂಬ
ನೆಲವ, ಬೆಳಸಿನೊಡೆಯನ ಪೊಗರಂತೆ                         ||4||
4.            ದಾರಿಯಲ್ಲಿ ಆಚೀಚೆ ಸರಿಯಾಗಿ ನೋಡುತ್ತಾ ನಡೆಯುವವನು (ದಾರಿಗನು) ಅಲ್ಲಲ್ಲಿ ಪಟ್ಟಣಗಳನ್ನೂ, ಕಾಡುಗಳನ್ನೂ, ಬೆಟ್ಟಗಳನ್ನೂ, ಸಮುದ್ರವನ್ನೂ, ಬೀದಿ, ದೇವಾಲಯ ಮೊದಲಾದುವನ್ನೂ ನೋಡಬಲ್ಲವನು; ಅದರಂತೆ ಜ್ಞಾನಿಯು ಮನಸ್ಸಿನಲ್ಲಿ ವಿಚಾರಮಾಡುತ್ತಾ ಹೋದಂತೆ ಜಗತ್ತಿನ ಆಶ್ಚರ್ಯಕರವಾದ ವಿಚಿತ್ರಗಳನ್ನೂ, ಭಗವಂತನ ದೈವೀ ಪ್ರಕಾಶವನ್ನೂ, ನಾನಾ ಬಗೆಯ ಅದರ ಪರಿಣಾಮಗಳನ್ನೂ ನೋಡಬಲ್ಲನು;
-----------------------------------------------------------------------------------------------------------------------

ಮರಳು ಕಾಡಿನ ಮೇಲೆ ಮಳೆ ಬೀಳಲೊಲ್ಲದು
ಕಡಲಲ್ಲಿ ಮಳೆ ಬೀಳುವುದು ನಿಲ್ಲದಂತೆ
ಕಂಬನಿ ಕಡಲಿಗೊಡೆಯನೊಲ್ಮೆ ಮಳೆ ಬಿದ್ದು
ಬಾಳ್ಬಿಂಕದುರಿ ಬಿಸಿಲೆಡೆ ಬೀಳದಂತೆ                       ||5||
5. ಬೇಗೆಯ ಮರಳು ಕಾಡಿನ ಮೇಲೆ ಮಳೆ ಸುರಿಯುವುದಿಲ್ಲ; ಆದರೆ ಸಮುದ್ರದ ಮೇಲೆ ಮಳೆ ಬೀಳುವುದು ತಪ್ಪುವುದಿಲ್ಲ; ಹಾಗೆಯೇ ಅತ್ತು ಕಣ್ಣೀರು ಸುರಿಸುವ ಭಕ್ತರ ಮೇಲೆ ಭಗವಂತನ ಅನುಗ್ರಹ ಹೆಚ್ಚಾಗಿರುವುದು.  ಜೀವನದಲ್ಲಿ ಬಿರು ಬಿಸಿಲಿನಂತೆ ಬಿಂಕ(ಅಹಂಕಾರ) ಪ್ರದರ್ಶಿಸುವರ ಮೇಲೆ ದೈವಾನುಗ್ರಹದ ಹನಿಮಳೆ ಬೀಳಲಾರದು.
----------------------------------------------------------------------------------------------------------------------
ತಿಳಿವಿನ ಬಾನಲ್ಲಿ ಮಿಂಚಿದರಿಲ್ಗಳೆ
ಬಿಡುಗಣ್ಣರೂರಾಗಿ ನಿಂತಿರ್ಪುವಂತೆ
ಇರುಳಾಗೆ ಬಾನಿನ ಗುಟ್ಟು ಕಣ್ತೆರೆವಂತೆ
ಸಾವಿನ ಮಬ್ಬು ಸಗ್ಗವ ತೋರ್ಪುದಂತೆ                        ||6||

6.            ಜ್ಞಾನಮಯವಾದ ಗಗನದಲ್ಲಿ ನಕ್ಷತ್ರಗಳಂತೆ ಹೊಳೆವ ವಿಚಾರಗಳನ್ನು ಸ್ವರೂಪಗೊಟ್ಟು ದೇವಲೋಕವೆಂದು ಹೆಸರಿಸಿ ನಿಲ್ಲಿಸಿರುವರು.  ರಾತ್ರಿಯಾದರೆ ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳು ಕಾಣಿಸಿಕೊಳ್ಳುವಂತೆ ಮರಣದ ಅಂಧಕಾರ ಆವರಿಸಿದ ಮೇಲೆಯೇ ಸ್ವರ್ಗವು ಕಾಣಿಸುವುದು.

No comments:

Post a Comment