ಸಂಪುಟ-೧

ಬದುಕು: ಬೆಳಕು: ಚುಟುಕು - ಸಂಪುಟ -೧  ಹೊತ್ತಗೆಯಿಂದ  ಆಯ್ದುದು:


ಬದುಕು:ಬೆಳಕು-4   ವಿವೇಕಾನಂದ: ಸರ್ವೋದ್ಧಾರ

ಬದುಕು: ಆಧ್ಯಾತ್ಮಿಕ ಸಾಧಕರು ಮತ್ತು ಪ್ರಾಪಂಚಿಕ ಸಾಧಕರ ನಡುವಣ ವ್ಯತ್ಯಾಸವನ್ನು ವಿವರಿಸುತ್ತಾ ಸ್ವಾಮಿ ವಿವೇಕಾನಂದರ ವಿದೇಶೀ ಶಿಷ್ಯೆ ಶ್ರೀಮತಿ ಲೆಕ್ಕೋಟ್ ತಮ್ಮದೇ ಉದಾಹರಣೆಯೊಡನೆ ಹೀಗೆ ವಿವರಿಸುತ್ತಾರೆ:
"ನನ್ನ ಜೀವಮಾನದಲ್ಲಿ ನಾನು ಇಬ್ಬರು ಮಹಾನುಭಾವರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಒಬ್ಬರು ಜರ್ಮನ್ ದೇಶದ ಮಹಾರಾಜರು, ಮತ್ತು ಇನ್ನೊಬ್ಬರು ಸ್ವಾಮಿ ವಿವೇಕಾನಂದರು. ಜರ್ಮನಿಯ ಮಹಾರಾಜರನ್ನು ಕಂಡಾಗ, ಆಶ್ಚರ್ಯಗೊಂಡ ನಾನು ಮನಸ್ಸಿನಲ್ಲೇ ಹೇಳಿಕೊಂಡೆ: ಓ! ದಿಟವಾಗಿಯೂ ಇವರೊಬ್ಬರು ಮಹಾನುಭಾವರು! ಈ ಆಶ್ಚರ್ಯದ ಭಾವನೆಯೊಡನೆಯೇ, ಅವರೆದುರು ನಾನೊಬ್ಬಳು ಸಾಮಾನ್ಯ ಮಾನವಳೆಂಬ ಕೀಳರಿಮೆಯ ಭಾವನೆಯೂ ಮನಸ್ಸಿಗೆ ಬಂತು.
                ಸ್ವಾಮಿ ವಿವೇಕಾನಂದರನ್ನು ಕಂಡಾಗಲೂ ಆಶ್ಚರ್ಯಗೊಂಡ ನಾನು ಓ! ನಿಜವಾಗಿಯೂ ಇವರೊಬ್ಬರು ಮಹಾನುಭಾವರು! ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಆದರೆ ಇಲ್ಲಿ ಒಂದು ದೊಡ್ಡ ವ್ಯತ್ಯಾಸವು ನನ್ನ ಗಮನಕ್ಕೆ ಬಂತು. ಅದೆಂದರೆ, ಸ್ವಾಮಿ ವಿವೇಕಾನಂದರು ಅತ್ಯುನ್ನತ ಮಟ್ಟದ ವ್ಯಕ್ತಿತ್ವನ್ನು ಹೊಂದಿದವರು, ಮತ್ತು ನನ್ನನ್ನು ಕೂಡ ಉನ್ನತ ಮಟ್ಟಕ್ಕೆ ಏರಿಸಲು  ಶಕ್ತರಾದ ಮಹಾನುಭಾವರು ಎಂಬುದು."
ಬೆಳಕು: ಮಹಾಪುರುಷರು ಪರುಷಮಣಿ ಇದ್ದಂತೆ. ಪರುಷಮಣಿಯು ತನ್ನ ಸಂಪರ್ಕಕ್ಕೆ ಬರುವ ಸಾಮಾನ್ಯ ಲೋಹವನ್ನು ಬಂಗಾರವಾಗಿಸುವಂತೆ ಮಹಾಪುರುಷರು ತಮ್ಮ ಸಂಪರ್ಕಕ್ಕೆ ಬರುವ ಸಾಮಾನ್ಯರನ್ನು ಅಸಾಮಾನ್ಯರಾಗಿಸುತ್ತಾರೆ.
ತಾನು ಕೊಂದ ವ್ಯಕ್ತಿಗಳ ಬೆರಳುಗಳನ್ನೇ ಮಾಲೆಯಾಗಿಸಿಕೊಂಡ ಕೊಲೆಗಡುಕ ಅಂಗೂಲಿಮಾಲ, ಭಗವಾನ್ ಬುದ್ಧನ ಬೆರಳನ್ನು ಕಡಿದು ಕೊರಳಲ್ಲಿ ಧರಿಸುವ ದುರಪೇಕ್ಷೆಯಿಂದ ಬಂದವನು, ಬುದ್ಧನ ಸಂಪರ್ಕಕ್ಕೆ ಬಂದೊಡನೆಯೇ ಮಹಾಪರಿವರ್ತನೆಗೆ ಒಳಗಾಗುತ್ತಾನೆ. ಮುಂದೆ ಬುದ್ಧನು ಪ್ರಚಾರಮಾಡುತ್ತಿದ್ದ ವಿಪಶ್ಯನಯೋಗವನ್ನು ಅಭ್ಯಾಸಮಾಡಿ ಯೋಗಿಯಾಗಿ, ವಿಪಶ್ಯನಯೋಗದ ಪ್ರಚಾರಕನಾಗುತ್ತಾನೆ. ಕೊಲೆಗಡುಕತನದ ಅವನ ಪೂರ್ವಜೀವನವನ್ನು ಅರಿತವರು ಅವನ ಗುರುತು ಹಿಡಿದಾಗ ಅವನನ್ನು ಹೀಗಳೆದು, ಕಲ್ಲೆಸೆದು ನೋಯಿಸಿದರೂ ತನ್ನ ಮನಶ್ಶಾಂತಿಯನ್ನು ಕಳೆದುಕೊಳ್ಳದೆ ಬುದ್ಧನ ಶಿಷ್ಯನಾಗಿ ಶಾಂತಜೀವನವನ್ನು ನಡೆಸಿದನು. ಅಂಗೂಲಿಮಾಲನಂತೆ ಸಾವಿರಾರು ಮಂದಿ ಬುದ್ಧನ ಸಂಪರ್ಕವಾದ ಬಳಿಕ ಉದ್ಧಾರ ಹೊಂದುತ್ತಾರೆ.
 ಮಹಾತ್ಮ ಗಾಂಧೀಜಿಯವರು ಅದೇ ದಾರಿಯಲ್ಲಿ ನಡೆದ ಇನ್ನೊಬ್ಬ ಮಹಾಪುರುಷರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ತಮ್ಮ ಬ್ರಿಟೀಷ್ ಮಿತ್ರ ಲಾರ್ಡ್ ಚೆಮ್ಸ್ ಫೋರ್ಡ್   ಅವರಿಗೆ ಹೀಗೆ ಬರೆಯುತ್ತಾರೆ:
 "ದೇಹಶಕ್ತಿಯ ಸ್ಥಾನದಲ್ಲಿ ನಾನು ಆತ್ಮಶಕ್ತಿ, ಅಥವಾ  ಅದಕ್ಕೆ ಇನ್ನೊಂದು ಹೆಸರಾದ ಪ್ರೀತಿಶಕ್ತಿ, ಇದನ್ನು ಜನಪ್ರಿಯಗೊಳಿಸಲು ಸಾಧ್ಯವಾದರೆ ಇಡೀ ವಿಶ್ವವನ್ನೇ ಧೈರ್ಯದಿಂದ ಎದುರಿಸಿ ನಿಲ್ಲಲು ಶಕ್ತವಾದ ಭಾರತವನ್ನು ನಿಮ್ಮೆದುರು ತೋರಿಸಬಲ್ಲೆ. ಎಲ್ಲಾ ಕಾಲದಲ್ಲೂ ನಾನು ನನ್ನನ್ನು ಶಿಸ್ತಿಗೆ ಒಳಪಡಿಸಿಕೊಂಡು   ಸತ್ಯ ಮತ್ತು ಅಹಿಂಸೆಗಳ ಶಾಶ್ವತ ನಿಯಮಗಳನ್ನು ನನ್ನ ಜೀವನದ ಮೂಲಕ ಪ್ರಕಟಪಡಿಸಿ, ಅವುಗಳನ್ನು ಸ್ವೀಕರಿಸಿ ಎಂದು ನನ್ನ ದೇಶಬಾಂಧವರ ಮತ್ತು ಅವುಗಳನ್ನು ಗಮನಿಸುವ ಇತರರ ಮುಂದೆ ಇರಿಸುತ್ತೇನೆ."
 ಪ್ರಪ್ರಥಮವಾಗಿ ತನ್ನನ್ನು ಶುದ್ಧೀಕರಿಸಿಕೊಂಡು ಮತ್ತು ಪರಿವರ್ತತಿಸಿಕೊಂಡು, ಬಳಿಕ ಇತರರಲ್ಲಿ ಪರಿವರ್ತನೆಯನ್ನು ಉಂಟುಮಾಡುವುದರ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ತರುವುದು ಗಾಂಧೀಜಿಯವರ ಕಾರ್ಯವಿಧಾನ. ಭಾರತಕ್ಕೆ ಅಹಿಂಸಾ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದುಕೊಡುವ ಹೋರಾಟದ ಕಾಲದಲ್ಲಿ ತಾವು ಮಹಾನ್ ವ್ಯಕ್ತಿಯಾಗುವುದರೊಡನೆಯೇ, ಭಾರತದ ಲಕ್ಷಾಂತರ ಸಾಮಾನ್ಯ ವ್ಯಕ್ತಿಗಳನ್ನು ಅಸಾಮಾನ್ಯ ಮಹಾನ್ ವ್ಯಕ್ತಿಗಳನ್ನಾಗಿ ಪರಿವರ್ತಿಸಿದರು.
ಇತರರನ್ನು ಕೆಳಗೆಳೆದು ತಾವು ಮೇಲೇರಿ ಲಾಭ ಗಳಿಸಿದವರ ಸಂಖ್ಯೆ ಅಪಾರ. ಇತರರಿಗೆ ಯಾವ ರೀತಿಯ ತೊಂದರೆಯನ್ನೂ ಕೊಡದೆ, ಇತರರಿಗೆ ಉಪಕಾರವನ್ನೂ ಮಾಡದೆ, ತಮ್ಮ ಉದ್ಧಾರವನ್ನಷ್ಟೇ ಮಾಡಿಕೊಂಡವರು  ಸಾವಿರಾರು ಮಂದಿ. ಆದರೆ ತಾವು ಎಚ್ಚರಗೊಂಡು, ಮೇಲೆದ್ದು, ಉದ್ಧಾರವಾಗುವುದರ ಜತೆಗೇನೇ ಇತರರನ್ನೂ ಎಚ್ಚರಿಸಿ, ಮೇಲೆತ್ತುವ ಮಹಾನುಭಾವರು ತೀರ ವಿರಳ. 
ಚುಟುಕು:
ಕೆಲರು ಮೇಲೇರುವರು ಪರರ ಮೇಲಿಂದಿಳಿಸಿ,
ಕೆಳಗಿಳಿದು ಮೇಲೆತ್ತಿ ಬೆಳಕಿತ್ತು ಬೆಳೆಸುವರು
ಜಲಪಾತ ಸದೃಶ ಗುರು ಜಾಣತಂತ್ರಜ್ಞ .        


ಬದುಕು:ಬೆಳಕು: ಚುಟುಕು -3       ಎಡಿಸನ್: ಸಂಕಷ್ಟ ಬಂದಾಗ
ಬದುಕು: ಥಾಮಸ್ ಆಲ್ವ ಎಡಿಸನ್ ಅವರ ಪ್ರಯೋಗಾಲಯಕ್ಕೆ 1914ರಲ್ಲಿ ಬೆಂಕಿ ಹತ್ತಿಕೊಂಡು ಸುಮಾರು 2 ಮಿಲಿಯ ಡಾಲರ್ ಮೌಲ್ಯದ ಉಪಕರಣಗಳು ಸುಟ್ಟು ಭಸ್ಮವಾದುವು. ಬೆಂಕಿ ಆರಿಸಲು ಮಾಡಿದ ಯಾವ ಪ್ರಯತ್ನಗಳೂ ಫಲಕಾರಿಯಾಗಲಿಲ್ಲ. ಮಗ ಚಾರ್ಲ್ಸ ತಂದೆಯನ್ನು ಹುಡುಕಿಕೊಂಡು ಬಂದಾಗ 67 ವರ್ಷದ ಎಡಿಸನ್ ಮುಂದೇನೂ ಮಾಡಲು ತೋಚದೆ ಕೆನ್ನಾಲಗೆಯನ್ನು ಚಾಚಿ ಉರಿಯುವ ಬೆಂಕಿಯನ್ನು ನೋಡುತ್ತಾ ನಿಂತಿದ್ದರು. ಅವರ ಬಿಳಿಯ ಕೂದಲು ಗಾಳಿಗೆ ಹಾರಾಡುತ್ತಿತ್ತು. ವಯಸ್ಸಾದ ತನ್ನ ತಂದೆಯ ಸ್ಥಿತಿಯನ್ನು ನೋಡಿ ಮಗನ ಹೃದಯ ಕಲಕಿತು. ಮಗನನ್ನು ನೋಡಿದ ಎಡಿಸನ್ ಹೇಳಿದರು: ನಿಮ್ಮಮ್ಮ ಎಲ್ಲಿ? ಅವಳನ್ನು ಬೇಗನೇ ಕರೆದುಕೊಂಡು ಬಾ. ಅವಳಿಗೆ ಉರಿಯುತ್ತಿರುವ ಬೆಂಕಿಯನ್ನು ನೋಡುವುದೆಂದರೆ ತುಂಬಾ ಸಂತೋಷದ ವಿಷಯ. ಇಂತಹ ದೃಶ್ಯವನ್ನು ಮುಂದೆಂದೂ ಆಕೆ ಕಾಣಲಾರಳು.
ಈ ದುರ್ಘಟನೆ ನಡೆದ ಮರುದಿನ ತನ್ನೆಲ್ಲ ಕನಸು ಮತ್ತು ಬಯಕೆಗಳ ಮಡಿಲಾಗಿದ್ದ ಪ್ರಯೋಗಾಲಯದ ಬೂದಿಯ ಮೇಲೆ ನಡೆಯುತ್ತಾ ಎಡಿಸನ್ ತನ್ನ ಪತ್ನಿಗೆ ಹೇಳಿದರು: ವಿಪತ್ತಿನಲ್ಲೂ ಎಂತಹ ಮೌಲ್ಯಗಳಿವೆ! ನಾವು ಪ್ರಯೋಗಾಲಯದಲ್ಲಿ ಮಾಡಿದ ಎಲ್ಲ ತಪ್ಪುಗಳೂ ಈಗ ಸುಟ್ಟು ಭಸ್ಮವಾಗಿವೆ. ಅದಕ್ಕಾಗಿ ನಾವು ದೇವರಿಗೆ ವಂದನೆಯನ್ನು  ಸಲ್ಲಿಸಬೇಕು. ಈಗ ನಾವು ಹೊಸದಾಗಿ ಜೀವನವನ್ನು ಪ್ರಾರಂಭಿಸಬಹುದು.
ಈ ದುರ್ಘಟನೆ ನಡೆದ ಕೆಲವೇ ವಾರಗಳಲ್ಲಿ ಎಡಿಸನ್ ಅವರು ಗ್ರಾಮ್-ಫೋನ್ ಕಂಡುಹಿಡಿದರು.
ಬೆಳಕು: ಕಷ್ಟಗಳು ಎದುರಾದಾಗ ಧೀರನಾದವನು ಹತಾಶನಾಗಿ ತನ್ನ ಹಣೆಬರಹವನ್ನು ಹಳಿಯುತ್ತಾ ಕುಳಿತುಕೊಳ್ಳುವ ಬದಲು, ಕೆಡುಕಿನ ನಡುವಿರುವ ಒಳಿತನ್ನು ಪತ್ತೆಹಚ್ಚಿ ಅದರ ಸದುಪಯೋಗವನ್ನು ಮಾಡಿಕೊಳ್ಳುತ್ತಾನೆ. ಕಷ್ಟಗಳು ಬರುವುದು ಮಾನವನ ಅಂತಶ್ಶಕ್ತಿಯನ್ನು ಕುಂದಿಸಲು ಅಲ್ಲ, ಅದನ್ನು ಉದ್ದೀಪನಗೊಳಿಸಲು. ಮಾನವನ ಅಂತಶ್ಶಕ್ತಿಯು ಎಷ್ಟಿದೆ ಎನ್ನುವುದು ಅವನು ಕಷ್ಟಗಳನ್ನು ಎದುರಿಸುವ ಪರಿಯಿಂದ ತಿಳಿದುಬರುತ್ತದೆ. ಕಷ್ಟಗಳು ಪ್ರಬಲವಾದಾಗ ದುರ್ಬಲ ಮನಸ್ಕರು ಹತಾಶರಾಗಿ ಕುಸಿದು ಬೀಳುತ್ತಾರೆ. ಆದರೆ ಪ್ರಬಲ ಆತ್ಮಬಲ ಇರುವವರು ಮುನ್ನಡೆ ಸಾಧಿಸುತ್ತಾರೆ.
 ಕಷ್ಟಗಳಿಗೆ ಬಾಹ್ಯ ಕಾರಣಗಳಿರಬಹುದು ಅಥವಾ ಎಷ್ಟೋ ವೇಳೆ ನಾವು ಕೈಗೊಂಡ ನಿರ್ಧಾರಗಳು ಅಥವಾ ಮಾಡಿದ ಕಾರ್ಯಗಳು ಕಾರಣವಾಗಿರಬಹುದು. ಕಷ್ಟಗಳಿಗೆ ಕಾರಣ ಏನೇ ಇದ್ದರೂ ಅವುಗಳನ್ನು ನಿವಾರಿಸುವಲ್ಲಿ ಮತ್ತು ನಿಯಂತ್ರಿಸುವುದರಲ್ಲಿ ನಮಗೆ ಅವಕಾಶ ಇದ್ದೇ ಇರುತ್ತದೆ. ನಮ್ಮ ಕಷ್ಟಗಳಿಗೆ ಇತರರು ಕಾರಣವೆಂದು ಅವರನ್ನು ಹಳಿಯುವುದು ಅಥವಾ ನಾವೇ ಕಾರಣವೆಂದು ನಮ್ಮನ್ನೇ ಶಪಿಸುತ್ತಿರುವುದು ಅಮೂಲ್ಯ ಸಮಯ ಮತ್ತು ಶಕ್ತಿಯ ಅಪವ್ಯಯಕ್ಕೆ ಕಾರಣವಾಗುತ್ತದೆ; ಮಾತ್ರವಲ್ಲದೆ ನಾವು ಮಾನಸಿಕವಾಗಿ ಬೆಳೆದು ಉತ್ತಮತರವಾದ ಫಲಿತಾಂಶವನ್ನು ಪಡೆಯಲು ಬೇಕಾದ ಕಲಿಕೆಯಿಂದ ವಂಚಿತರಾಗುತ್ತೇವೆ.
ಇತರರನ್ನು ಅಥವಾ ನಮ್ಮನ್ನೇ ಹಳಿಯುವ  ಬದಲು ಆತ್ಮ-ವಿಮರ್ಶೆ ಮಾಡಿಕೊಳ್ಳುವುದು ಸೂಕ್ತ. ನಮ್ಮ ಪೂರ್ವಸಿದ್ಧತೆ, ಎಚ್ಚರ, ನಿರ್ಧಾರಗಳು, ಕಾರ್ಯಗಳನ್ನು ಮಾಡುವಾಗ ಇದ್ದ ಸಮರ್ಪಣಭಾವ ಇವುಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು; ಒಂದು ವೇಳೆ ನಮ್ಮಿಂದ ತಪ್ಪುಗಳಾದುದು ಕಂಡುಬಂದರೆ, ಅದನ್ನು ನಮ್ರತೆಯಿಂದ ಒಪ್ಪಿಕೊಂಡು ಮುಂದೆ ಅಂತಹ ತಪ್ಪುಗಳು ಘಟಿಸದಂತೆ ನಮಗೆ ನಾವೇ ಒಳಸೂಚನೆ ಕೊಡಬೇಕು. ಹೀಗೆ ಮಾಡುವುದರಿಂದ ನಾವು ಜೀವನಶಾಲೆಯಲ್ಲಿ ಅಮೂಲ್ಯ ಪಾಠಗಳನ್ನು ಕಲಿತು ಬೆಳೆಯುತ್ತೇವೆ.
ಸಂಕಷ್ಟಗಳನ್ನು ಎದುರಿಸಿ ಗೆದ್ದಾಗ ಮಾತ್ರ ಈ ಜಗತ್ತಿನಲ್ಲಿ ನಮ್ಮ ಅಸ್ತಿತ್ವದ ಆನಂದದ ಅನುಭವವಾಗುತ್ತದೆ. ಎಷ್ಟೋ ವೇಳೆ ನಾವು ದುರಾದೃಷ್ಟಕರ ಎಂದು ಭಾವಿಸುವ ಘಟನೆಗಳು ಮುಂದೆ ಉತ್ತಮ ಅದೃಷ್ಟದ ಏರುವಿಕೆಗೆ ಸೋಪಾನವಾಗುವುದಿದೆ. ಅದೂ ಅಲ್ಲದೆ, ಈಗಿನ ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ, ಹೊಸ ಅವಕಾಶಗಳು ಇದ್ದೇ ಇರುತ್ತವೆ; ಕಷ್ಟವನ್ನು ಪರಿಹರಿಸುವ ಮತ್ತು ವಿಜಯದತ್ತ ಕರೆದೊಯ್ಯುವ ಮಾರ್ಗಗಳು ತೆರೆದೇ ಇರುತ್ತವೆ; ಮತ್ತು ಏನೆಲ್ಲ ಬಾಹ್ಯ ಒತ್ತಡಗಳಿದ್ದರೂ ಅಂತರಂಗದಲ್ಲಿ ಶಾಂತಿ ಮತ್ತು ಸಮಾಧಾನಗಳನ್ನು ಪಡೆಯುವುದು ನಮ್ಮ ಕೈಯಲ್ಲೇ ಇದೆ. ಕಷ್ಟದ ನಡುವಿನಲ್ಲಿ ಒಳಿತನ್ನು ಹುಡುಕಿ, ಆತ್ಮವಿಮರ್ಶೆ ಮಾಡಿ, ಪಾಠ ಕಲಿತು, ಸದವಕಾಶಗಳನ್ನು ಅರಸಿ, ಜೀವನದಲ್ಲಿ ಮುಂದಿನ ಹೆಜ್ಜೆಗಳನ್ನು ಇರಿಸುವುದು ಸಫಲಜೀವನದ ಕಾರ್ಯವೈಖರಿ.
ಚುಟುಕು:
ಸುತ್ತ ಗ್ರಹಗಳು ಬರಡು, ಹುಡುಕು ಬುವಿ ಸಸ್ಯವತಿ
ಕಷ್ಟ ಬರೆ - ತಿಳಿ ತಪ್ಪು, ಕಲಿ ಪಾಠ, ನಡೆ ಮುಂದೆ,
ಕತ್ತಲಲು ತಾರೆಯಿವೆ ಜಾಣತಂತ್ರಜ್ಞ .     
     
--------------------------------------------------------------------------------------------------------------------------
ಬದುಕು: ಬೆಳಕು: ಚುಟುಕು-2
ಮಾರಿಯೋ ಪೋಜಿಯೋ: ಸಮರ್ಪಣ ಭಾವ
ಬದುಕು: ತ್ಯಾಗದ ಮೂರ್ತಿ ಮಾರಿಯೋ ಪೋಜಿಯೋ ಇಟೆಲಿ ದೇಶದ ಟ್ಯೂರಿನ್ ವಿಶ್ವವಿದ್ಯಾಲಯದಲ್ಲಿ ರೇಡಿಯಾಲಜಿ ತಜ್ಞೆಯಾಗಿದ್ದ ಮಹಿಳೆ. ಅವರು ಕುಷ್ಠರೋಗಕ್ಕೆ ಔಷಧಿಯನ್ನು ಕಂಡುಹಿಡಿಯಲು ಅನೇಕ ರೀತಿಯ ಸಂಶೋಧನೆಗಳನ್ನು ಮಾಡುತ್ತಿದ್ದರು. ಮಾನವ ದೇಹದ ಮೇಲೆ ಎಕ್ಸ್ರೇ ಕಿರಣಗಳು ಯಾವ ರೀತಿಯ ಪರಿಣಾಮವನ್ನು ಉಂಟುಮಾಡುತ್ತವೆ ಎಂಬುದನ್ನು ಅರಿಯಲು ಅವರೊಮ್ಮೆ ತಮ್ಮ ದೇಹದ ಮೇಲೆಯೇ ಅವುಗಳನ್ನು ಹಾಯಿಸಿ ಪರೀಕ್ಷಿಸಿದರು. ಅದರ ಪರಿಣಾಮವಾಗಿ ಅವರು ಸುಟ್ಟುಹೋದ ತಮ್ಮ ಎಡಗೈಯ ಬೆರಳೊಂದನ್ನು ಕತ್ತರಿಸಿಕೊಳ್ಳಬೇಕಾಯಿತು. ರೇಡಿಯಂ ತಂಟೆಗೆ ಹೋಗಬೇಡಿರೆಂದು ಹಿತೈಷಿಗಳು ಸಲಹೆಯಿತ್ತಾಗ ಅವರು ಹೇಳಿದರು:
ಒಂದು ಬೆರಳು ತಾನೇ ಹೋದದ್ದು? ಸಂಶೋಧನೆ ಮುಂದುವರಿಸಲು ಇನ್ನೂ ನಾಲ್ಕು ಬೆರಳುಗಳಿವೆ!
                ಎದೆಗುಂದದ ಅವರು ಎಕ್ಸ್ರೇ ಕಿರಣಗಳ ಬಳಕೆಯ ಕುರಿತಾದ ಸಂಶೋಧನೆಯನ್ನು ಮುಂದುವರಿಸಿದರು. ಅದರ ಪರಿಣಾಮವಾಗಿ ಅವರ ಸಂಪೂರ್ಣ ಎಡಗೈಯನ್ನೂ, ಬಲಗೈಯ ಮುಂಭಾಗವನ್ನೂ ಕತ್ತರಿಸಿ ತೆಗೆಯಬೇಕಾಯಿತು. ಇನ್ನಾದರೂ ರೇಡಿಯಂ ಮತ್ತು ಎಕ್ಸ್ರೇ ಕಿರಣಗಳ ಕುರಿತಾದ ಸಂಶೋಧನೆಗಳನ್ನು ನಿಲ್ಲಿಸಿ ಎಂದು ಅವರ ಮಿತ್ರವರ್ಗ ಸಲಹೆ ಕೊಟ್ಟಿತು. ಆಗ ಅವರು ಕೊಟ್ಟ ಉತ್ತರ ಹೀಗಿತ್ತು:
ಮಾನವನು ತನ್ನ ಜೀವನದ ಪ್ರತಿಯೊದು ಕ್ಷಣವನ್ನು, ಪ್ರತಿಯೊಂದು ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಕುಷ್ಠರೋಗಕ್ಕೆ ಔಷಧಿಯನ್ನು ಕಂಡುಹಿಡಿಯುವುದನ್ನು ಬಿಟ್ಟು ನನಗೆ ಜೀವನದಲ್ಲಿ ಇನ್ನು ಬೇರೆ ಯಾವ ಗುರಿಯೂ ಇಲ್ಲ.
ಆ ಮಹಾನ್ ಮಹಿಳೆ ತನ್ನ ಜೀವನದ ಉದ್ದಕ್ಕೂ ರೇಡಿಯಂ ಮತ್ತು ಎಕ್ಸ್ರೇ ಕಿರಣಗಳ ಕುರಿತಾದ ತನ್ನ ಸಂಶೋಧನೆಗಳನ್ನು ಮುಂದುವರಿಸಿದರು.
ಬೆಳಕು: ಜೀವನದಲ್ಲಿ ಏನು ಮಾಡಬಾರದು ಎಂಬುದನ್ನು ನಮ್ಮಲ್ಲಿ ಎಷ್ಟೋ ಮಂದಿ ನಿರ್ಧರಿಸಿರುತ್ತೇವೆ. ಆದರೆ ಏನು ಮಾಡಬೇಕೆಂಬ ಗುರಿಯನ್ನು ಮಾತ್ರ ನಮ್ಮಲ್ಲಿ ಎಷ್ಟೋ ಮಂದಿ ನಿರ್ಧರಿಸಿಕೊಂಡಿರುವುದಿಲ್ಲ. ಪರಿಪೂರ್ಣವಾದ ಮತ್ತು ಸಮಾಧಾನಕರವಾದ ಜೀವನವನ್ನು ನಡೆಸಲು ನಾವು ಬಾಳಿನಲ್ಲಿ ನಿರ್ದಿಷ್ಟವಾದ ಗುರಿ ಇಟ್ಟುಕೊಳ್ಳುವುದು ಮತ್ತು ಭವ್ಯವಾದ ಕನಸುಗಳನ್ನು ಕಾಣುವುದು ಅತ್ಯಾವಶ್ಯಕ. ಗುರಿಯನ್ನು ನಿರ್ಧರಿಸಿಕೊಂಡಿರುವವರಲ್ಲಿಯೂ, ಗುರಿಯತ್ತ ಸಾಗುವಾಗ, ಸಮರ್ಪಣಭಾವದಿಂದ ಕೆಲಸ ಮಾಡುವವರು ಮತ್ತಷ್ಟು ಕಡಿಮೆ. ಉದಾತ್ತ ಗುರಿಯನ್ನು ಇರಿಸಿಕೊಂಡು, ತನ್ನೆಲ್ಲಾ ಯೋಚನೆಗಳಲ್ಲಿ ಗುರಿಯನ್ನು ತುಂಬಿಕೊಂಡು, ತನ್ನ ಜೀವನದ ಪ್ರತಿಯೊದು ಕ್ಷಣವನ್ನು, ಮತ್ತು ಪ್ರತಿಯೊಂದು ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು,   ಸಮರ್ಪಣಭಾವದಿಂದ ಸಾಗುವವರು ಗುರಿಯನ್ನು ಸೇರಿ ಮಹಾಸಾಧಕರು ಎನಿಸುತ್ತಾರೆ.  ಜೀವನೋದ್ದೇಶಗಳನ್ನು ಗುರುತಿಸಿಕೊಂಡು ಸಮರ್ಪಣಭಾವದಿಂದ ಮುಂದುವರಿಯುವವರು ತಾವು ಗುರಿಯನ್ನು ತಲಪುವ ವರೆಗೂ ಜೀವನದಲ್ಲಿ ಅತೀವ ಆಸಕ್ತಿಯನ್ನು, ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಮನಸ್ಥಿತಿಯನ್ನು, ಮುನ್ನಡೆಯಲು ಬೇಕಾದ ಶಕ್ತಿಯನ್ನು, ಮತ್ತು ಜೀವನಪ್ರೀತಿಯನ್ನು ಇಟ್ಟುಕೊಂಡಿರುವವರಾಗುತ್ತಾರೆ. ತಮಗಾಗುವ ಶ್ರಮ ಮತ್ತು ಅಪಕೀರ್ತಿಗಳನ್ನೂ ಅವರು ಲೆಕ್ಕಿಸುವುದಿಲ್ಲ. ತಾನು  ಏನು ಸಾಧಿಸಬೇಕಾಗಿದೆಯೆಂಬುದರ ಕುರಿತು ಬಲವಾದ ಅಭಿಪ್ರಾಯವನ್ನು ಹೊಂದಿರುವ ಇವರು ಇತರರ ನಿರಾಶಾದಾಯಕ ಮಾತುಗಳಿಂದ ವಿಚಲಿತರಾಗುವುದಿಲ್ಲ. ಹಾಗಾಗಿ ಅವರು ತಾವಿರಿಸಿಕೊಂಡ ಗುರಿಯನ್ನು ಸೇರಿ ಜೀವನದಲ್ಲಿ ಜಯಶೀಲರಾಗುವ ಸಾಧ್ಯತೆಗಳೇ ಹೆಚ್ಚು. 
ಹೋಮಿಯೋಪತಿ ವೈದ್ಯವಿಧಾನದ ಜನಕನಾದ ಸಾಮ್ಯುವೆಲ್ ಹಾಹ್ನಮನ್ ಇದೇ ರೀತಿಯ ಮಹಾನ್ ವ್ಯಕ್ತಿ. ಔಷಧಿಯ ಗುಣವನ್ನು ಅರಿಯುವ ಪರಮೋದ್ದೇಶ ಇರಿಸಿಕೊಂಡ ಅವರು ಔಷಧಿಗಳನ್ನು ಸಮರ್ಪಣಭಾವದಿಂದ ತನ್ನ ಮೇಲೆಯೇ ಪ್ರಯೋಗಿಸಿಕೊಂಡು ಔಷಧಿಯ ಗುಣಾವಗುಣಗಳನ್ನು ಪರೀಕ್ಷಿಸುತ್ತಿದ್ದರಂತೆ.
 ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ಮತ್ತು ಅವರ ಅನುಯಾಯಿಗಳು ಭಾರತಕ್ಕೆ ಸ್ವಾತಂತ್ರ್ಯ ತರುವ ಉದಾತ್ತ ಉದ್ದೇಶವನ್ನು ಇರಿಸಿಕೊಂಡು ಸಮರ್ಪಣಭಾವದಿಂದ ಹೋರಾಡಿದುದರಿಂದ ಅಹಿಂಸಾಮಾರ್ಗವು, ಜಗತ್ತು ಹಿಂದೆಂದೂ ಕಂಡಿರದ, ಅಭೂತಪೂರ್ವ ಜಯವನ್ನು ತಂದುಕೊಟ್ಟಿತ್ತು. ಮಹಾಸಾಧನೆಯ ಮಾರ್ಗದಲ್ಲಿ ಹೆಗ್ಗುರಿಯು ದಿಕ್ಸೂಚಿಯಾದರೆ, ಸಮರ್ಪಣಭಾವವು ಮಾಡುವ ಕಾರ್ಯದ ಗುಣಮಟ್ಟವನ್ನು ಹೆಚ್ಚಿಸಿ ವಿಜಯದತ್ತ ಒಯ್ಯುತ್ತದೆ.

ಚುಟುಕು:
ಪರಿಪೂರ್ಣ ಬಲ ಬಳಸಿ, ಕಷ್ಟಗಳ ಕೆಳಗೊತ್ತಿ,
ಸರಿದಾರಿಯಲಿ ನಡೆಯೆ ಬಯಸಿದೆಲ್ಲವ ಪಡೆವೆ,
ಇರೆ ಸಮರ್ಪಣ ಭಾವ ಜಾಣತಂತ್ರಜ್ಞ .  
----------------------------------------------------------------
                         
ಬದುಕು : ಬೆಳಕು: ಚುಟುಕು- 1
ಡಿಮೋಸ್ತನೀಸ್ : ಜೀವನದ ಗುರಿ
ಬದುಕು: ಡಿಮೋಸ್ತನೀಸ್ ಕ್ರಿ.ಪೂ. 4ನೇ ಶತಮಾನದಲ್ಲಿ   ಗ್ರೀಸ್‌ ದೇಶದ ಏಥೆನ್ಸ್ ನಗರದ ಪ್ರಜೆ. ಅಲೆಕ್ಸಾಂಡರನ ತಂದೆ ಫಿಲಿಪ್ಸ್  ರಾಜನಾಗಿದ್ದ ಆ ಕಾಲದಲ್ಲಿ ಗ್ರೀಸಿನಲ್ಲಿ ವಾಗ್ಮಿಗಳಿಗೆ ತುಂಬಾ ಗೌರವವಿರುತ್ತಿತ್ತು. ಇದನ್ನು ಗಮನಿಸಿದ ಬಾಲಕ ಡಿಮೋಸ್ತನೀಸ್ ತಾನೊಬ್ಬ ದೊಡ್ಡ ವಾಗ್ಮಿಯಾಗಬೇಕೆಂಬ ಮಹಾ ಗುರಿಯನ್ನು ಇರಿಸಿಕೊಂಡ. ಆದರೆ ಅವನಿಗೆ ಉಗ್ಗುವ ತೊಂದರೆ ಇದ್ದುದರಿಂದ ನಿರರ್ಗಳವಾಗಿ ಸುಲಲಿತವಾಗಿ ಮಾತಾಡಲಾಗುತ್ತಿರಲಿಲ್ಲ. ಇದಲ್ಲದೆ ಮನೆಯಲ್ಲೂ ಅವನಿಗೆ ಅನೇಕ ತೊಂದರೆಗಳಿದ್ದುವು. ಅವನ ವಯಸ್ಸು 7 ಆಗಿದ್ದಾಗ ತಂದೆ ತೀರಿಕೊಂಡಿದ್ದುದರಿಂದ, ಅವನ ಚಿಕ್ಕಪ್ಪ ಅವನ ಪಾಲಿನ ಆಸ್ತಿಯನ್ನು ಕಬಳಿಸಲು ಹೊಂಚುಹಾಕುತ್ತಿದ್ದ. ಇಷ್ಟೆಲ್ಲಾ ತೊಂದರೆಗಳಿದ್ದರೂ ಅವನು ವಾಗ್ಮಿಯಾಗಬೇಕಿಂದಿದ್ದ ತನ್ನ ಗುರಿಯಿಂದ ಕೊಂಚವೂ ವಿಚಲಿತನಾಗಲಿಲ್ಲ. ಅವನ ಪ್ರಪ್ರಥಮ ಸಾರ್ವಜನಿಕ ಭಾಷಣ ಹಾಸ್ಯಾಸ್ಪದವಾಗಿ ಪರಿಣಮಿಸಿ, ಅವನು ತೀರ ನಿರುತ್ಸಾಹಿಯಾದಾಗ ಒಬ್ಬ ನಟ ಭಾಷಣಕಲೆಯ ತಂತ್ರವನ್ನು ಅವನಿಗೆ ವಿವರಿಸಿದ.
ಉಗ್ಗುವ ತೊಂದರೆಯನ್ನು ಹೋಗಲಾಡಿಸಲು ಅವನು ನಾಲಗೆಯ ಕೆಳಗೆ ಹರಳು ಕಲ್ಲುಗಳನ್ನು ಇರಿಸಿಕೊಂಡು   ಉಸಿರನ್ನು ನಿಯಂತ್ರಿಸುತ್ತಾ ಎತ್ತರದ ಬೆಟ್ಟಗಳನ್ನು ಹತ್ತಿ ಇಳಿಯುತ್ತಿದ್ದ. ಉಗ್ಗುವಿಕೆಯಿಂದ ಹೊರಬರಲು ಮತ್ತು ಕಂಚಿನ ಕಂಠದಿಂದ ಮಾತನಾಡಲು ಅವನು ಸಮುದ್ರದ ದಂಡೆಗೆ ಹೋಗಿ ಅಲೆಗಳ ಭೋರ್ಗರೆಯುವಿಕೆಯನ್ನು ಮೀರಿದ ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿದ್ದ. ಅವನ ಮನಸ್ಸನ್ನು ಸೆಳೆಯುತ್ತಿದ್ದ ವಿದೇಶ ಪ್ರಯಾಣಗಳನ್ನು ತಪ್ಪಿಸಲು ತಲೆಯ ಅರ್ಧ ಭಾಗದಲ್ಲಿ ಕೂದಲನ್ನು ತೆಗೆಸಿ, ಸ್ವಯಂಕೃತ ವಿರೂಪವನ್ನು ತಂದುಕೊಂಡು, ನೆಲಮಾಳಿಗೆಯ ಕೋಣೆಯೊಳಗೆ ತನ್ನನ್ನೇ  ಬಂಧಿಯಾಗಿಸಿಕೊಂಡು ಅಧ್ಯಯನದಲ್ಲಿ ಮುಳುಗಿಹೋಗುತ್ತಿದ್ದ. ತನ್ನ ಕೋಣೆಯೊಳಗೆ ಇರಿಸಿಕೊಂಡ ಆಳೆತ್ತರದ ಕನ್ನಡಿಯ ಮುಂದೆ ನಿಂತು ಭಾಷಣ ಮಾಡುವ ಕಲೆಯಲ್ಲಿ  ಪರಿಣತಿಯನ್ನು ಪಡೆಯುತ್ತಿದ್ದ. ಹೀಗೆ ವಾಕ್ಚಾತುರ್ಯದ ಕಲೆಯಲ್ಲಿ ನೈಪುಣ್ಯ ಪಡೆಯುವ ಗುರಿಯನ್ನು ಸೇರಲು ಅವನು  ಬಹು ಪರಿಯಲ್ಲಿ ಶ್ರಮಿಸಿದನು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಅವನು ಶ್ರೇಷ್ಠ ವಾಗ್ಮಿಯೆಂದು ಗುರುತಿಸಲ್ಪಟ್ಟ. ಅವನ ವಾಕ್ಚಾತುರ್ಯವನ್ನು ಮೆಚ್ಚಿಕೊಂಡ ಗ್ರೀಸಿನ ರಾಜ,  "ವೈರಿಗಳ ಖಡ್ಗದ ಹೊಡೆತವನ್ನಾದರೂ ಸಹಿಸಿಕೊಳ್ಳಬಹುದು; ಆದರೆ ಡಿಮೋಸ್ತನೀಸನ ನಾಲಗೆಯ ಹೊಡೆತವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ!" ಎನ್ನುತ್ತಿದ್ದ.
ಬೆಳಕು: ಸಮುದ್ರಯಾನ ಮಾಡುತ್ತಿರುವ ಹಡಗಿನ ಕಪ್ತಾನನಿಗೆ ತಲಪಬೇಕಾದ ಬಂದರಿನ ಅರಿವು ಎಷ್ಟು ಅಗತ್ಯವೋ ಅದಕ್ಕಿಂತಲೂ ಹೆಚ್ಚು ಅಗತ್ಯ ಸಾರ್ಥಕ ಜೀವನವನ್ನು ನಡೆಸಲು ನಿರ್ದಿಷ್ಟವಾದ ಗುರಿಯ ಅರಿವು. ನಾವು ಇರಿಸಿಕೊಳ್ಳುವ ಗುರಿಯು ನಮಗೆ ಜೀವನದಲ್ಲಿ ಅತೀವ ಆಸಕ್ತಿಯನ್ನು , ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ಮನಸ್ಥಿತಿಯನ್ನು , ಮುನ್ನಡೆಯು ಶಕ್ತಿಯನ್ನು , ಮತ್ತು ಜೀವನಪ್ರೀತಿಯನ್ನು ನೀಡುತ್ತದೆ.
1953ರಲ್ಲಿ ಅಮೇರಿಕಾದ ಯೇಲ್ ಯುನಿವರ್ಸಟಿಯಲ್ಲಿ ಒಂದು ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಅಲ್ಲಿನ ವಿದ್ಯಾರ್ಥಿಗಳನ್ನು  ಸಂದರ್ಶಿಸಿದಾಗ,ಅವರಲ್ಲಿ ಕೇವಲ ಶೇಕಡಾ 3ರಷ್ಟು  ಮಂದಿ  ಮಾತ್ರ ಜೀವನದಲ್ಲಿ ತಾವು ಮುಂದೇನು ಆಗಬೇಕೆಂಬುದರ ನಿಶ್ಚಿತವಾದ ಅಭಿಪ್ರಾಯವನ್ನು ಹೊಂದಿದ್ದರು, ಮತ್ತು ಉಳಿದವರು ಆ ಬಗ್ಗೆ ನಿರ್ದಿಷ್ಟ ಗುರಿಯನ್ನಾಗಲಿ ಅಥವಾ ಯೋಚನೆಯನ್ನಾಗಲಿ ಹೊಂದಿರಲಿಲ್ಲ ಎಂದು ತಿಳಿದುಬಂತು. ಈ ಸಮೀಕ್ಷೆಯನ್ನು 30 ವರ್ಷಗಳ ಬಳಿಕ ಅಷ್ಟೂ ಮಂದಿಯ ಮೇಲೆ ಮತ್ತೆ ನಡೆಸಿದಾಗ ತಿಳಿದುಬಂತು: ಈ ಶೇಕಡಾ 3ರಷ್ಟು ಮಂದಿ ಉಳಿದವರಿಗಿಂತ ಹೆಚ್ಚು ಜಯಶೀಲರೂ, ಸಿರಿವಂತರೂ ಆಗಿದ್ದರು ಎಂಬುದು. ಗುರಿಯ ಅವಶ್ಯಕತೆಯನ್ನು ಇದು ಬಿಂಬಿಸುತ್ತದೆ.
ಒಮ್ಮೆ ಒಬ್ಬ ಮನೋವಿಜ್ಞಾನಿ 3000 ಜನರನ್ನು ಸಂದರ್ಶಿಸಿ, "ನಿಮ್ಮ ಬಾಳಿನ ಗುರಿಯೇನು? ಯಾವ ಕಾರ್ಯದಲ್ಲಿ ನಿಮ್ಮನ್ನು ಈಗ ತೊಡಗಿಸಿಕೊಂಡಿದ್ದೀರಿ?" ಎಂದು  ಅವರಲ್ಲಿ  ಪ್ರತಿಯೊಬ್ಬನನ್ನೂ ಪ್ರಶ್ನಿಸಿದ. ಅವರಲ್ಲಿ 100ರಲ್ಲಿ 94 ಮಂದಿ ಯಾವುದೇ ನಿರ್ದಿಷ್ಟ ಉದ್ದೇಶ ಹಾಗೂ ಕಾರ್ಯಗಳಿಲ್ಲದೇನೇ ವರ್ತಮಾನದ ದಿನಗಳನ್ನು ಕಳೆಯುತ್ತಿದ್ದರು. ನಾಳೆ, ಬರುವ ತಿಂಗಳು, ಬರುವ ವರ್ಷ ನೋಡೋಣ ಎಂದು, ಭವ್ಯ ಭವಿಷ್ಯತ್ತು ಹುಡುಕಿಕೊಂಡು ಬರಬಹುದು ಎಂದು, ಮಕ್ಕಳು ಶ್ರೀಮಂತರಾಗಿ ತಮಗೆ ಸಹಾಯ ಮಾಡಬಹುದು ಎಂದು, ತಮ್ಮ ಮೇಲಿರುವವರು ಕೆಳಗುರುಳಿದರೆ ತಮಗೆ ಅವಕಾಶ ಸಿಗಬಹುದು ಎಂದು ಮುಂತಾಗಿ  ಕಾಯುತ್ತಾ ನಿರ್ದಿಷ್ಟ  ಗುರಿ  ಇರಿಸಿಕೊಳ್ಳದೆ  ಕಾಲಹರಣ  ಮಾಡುತ್ತಿದ್ದರು.
ಚುಟುಕು:
ಗುರಿ   ಕ್ಷಿಪಣಿಗಿರಬೇಕು, ಹಡಗಿಗೋ   ಕೊನೆರೇವು
ಹೊರಗಿನೊಳಗಿನ   ಶಕ್ತಿ   ಬಳಸಿ   ಬೆಳಗಲು   ಬಾಳು
ನರಗೆ ಹೆಗ್ಗುರಿ ಬೇಕು  ಜಾಣತಂತ್ರಜ್ಞ .

No comments:

Post a Comment