ಸಂಪುಟ-೨

ಬದುಕು:ಬೆಳಕು:ಚುಟುಕು - ಸಂಪುಟ-೨ ಹೊತ್ತಗೆಯಿಂದ:
--------------------------------------------------------------------------------------------------------------------- 
ಬದುಕು: ಬೆಳಕು: ಚುಟುಕು-55              ರಾಂಡಿ ಪೋಶ್ಚ್: ಕೊನೆಯ ಉಪನ್ಯಾಸ
ಬದುಕು: 'ನೀವಿನ್ನು ಆರು ತಿಂಗಳು ಮತ್ರ ಬದುಕಿವಿರಿ!' ಎಂದು ತಜ್ಞವೈದ್ಯರು ಮರ್ಮಭೇದಕ ಮಾತನ್ನು ಹೇಳಿದಾಗ ಕಾರ್ನೆಗಿಮೆಲನ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರಾಧ್ಯಾಪಕರಾಗಿದ್ದ ರಾಂಡಿ ಪೋಶ್ಚ್ ಒಮ್ಮೆ ತತ್ತರಿಸಿದರೂ ಕೂಡಲೇ ತನ್ನ ಆಂತರಿಕ ಶಕ್ತಿಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಯೋಚಿಸತೊಡಗಿದರು. ತಾನು ಹತಾಶನಾಗಿ ತಲೆಯ ಮೇಲೆ ಕೈಹೊತ್ತು ಕುಳಿತರೆ, ಅದರಿಂದಾಗಿ ಅವರ ಪತ್ನಿ ಮತ್ತು ಮೂವರು ಪುಟ್ಟ ಮಕ್ಕಳಿಗೆ ಎಳ್ಳಷ್ಟೂ ಪ್ರಯೋಜನವಾಗುವುದಿಲ್ಲ. ಅದರ ಬದಲು ತಾನಿಲ್ಲದಾಗ ಅವರ ಭವಿಷ್ಯ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಅವಶ್ಯಕವಾದ ಕ್ರಮಗಳನ್ನು ಕೈಗೊಂಡು, ತನ್ನ ಬಾಳಿನಲ್ಲಿ ಉಳಿದಿರುವ ಅಲ್ಪ ಸಮಯದ ಪ್ರತಿಯೋದು ಕ್ಷಣವನ್ನೂ ಅವರೊಡನೆ ಕಳೆಯಬೇಕು. ತಾನು ಬದುಕಿ ಇದ್ದಿದ್ದರೆ ಮುಂದಿನ ಹತ್ತಾರು ವರ್ಷಗಳಲ್ಲಿ ತನ್ನ ಮಕ್ಕಳಿಗೆ ಜೀವನದ ಗುರಿಗಳು, ಸಾಧನೆಗಳು, ಸಮಸ್ಯೆಗಳು, ಪರಿಹಾರಗಳು ಇವುಗಳ ಕುರಿತು ತನ್ನ ಜೀವನದ ಅನುಭವದ ಆಧಾರದಲ್ಲಿ ಏನೆಲ್ಲ ಕಲಿಸುತ್ತಿದ್ದೆನೋ ಅದನ್ನು ಅವರು ದೊಡ್ಡವರಾದಾಗ ತಾನಿಲ್ಲದಿದ್ದರೂ ಕಲಿಯುವಂತಾಗಬೇಕು; ಅಲ್ಲದೆ ವಿಶ್ವದ ಲಕ್ಷಾಂತರ ವ್ಯಕ್ತಿಗಳ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು  ಉಂಟುಮಾಡಬೇಕು ಎಂದು ಯೋಚಿಸಿ, ಅದಕ್ಕಾಗಿ ತನ್ನ ಕಾರ್ನೆಗಿಮೆಲನ್ ವಿಶ್ವವಿದ್ಯಾನಿಲಯದಲ್ಲಿ ತನ್ನದೊಂದು ಅಂತಿಮ ಉಪನ್ಯಾಸ ನೀಡಬೇಕೆಂದು ನಿರ್ಧರಿಸಿದರು. ಸಾಮಾನ್ಯವಾಗಿ ನಿವೃತ್ತರಾಗುವ ಪ್ರಾಧ್ಯಾಪಕರು ತಮ್ಮ ಕೊನೆಯ ಉಪನ್ಯಾಸ ಕೊಡುವ ಕ್ರಮ ಈಗಾಗಲೇ ಯುನಿವರ್ಸಿಟಿಯಲ್ಲಿ ಪ್ರಚಲಿತವಿತ್ತು. ಆದರೆ ಪೋಶ್ಚ್ ಅವರ ಕೊನೆಯ ಉಪನ್ಯಾಸ ಸಾವಿನ ದಿನಗಳನ್ನು ಎಣಿಸುತ್ತಿದ್ದ 48ರ ಹರಯದ ಪ್ರಾಧ್ಯಾಪಕನ ಬದುಕಿನ ಕೊನೆಯ ಉಪನ್ಯಾಸವಾಗಿತ್ತು. ಜುಲೈ 8, 2007ರ ಆ ಉಪನ್ಯಾಸದ ಶೀರ್ಷಿಕೆ- 'ನಿಮ್ಮ ಬಾಲ್ಯದ ಕನಸುಗಳನ್ನು ನನಸಾಗಿಸುವುದು'. ಪೋಶ್ಚ್ ರವರ ಬಾಲ್ಯದ 6 ಕನಸುಗಳು ಇವು: 1. ಶೂನ್ಯ ಗುರುತ್ವಾಕರ್ಷಣೆಯ ಅನುಭವ, 2. ಅಮೇರಿಕಾದ ಪ್ರಸಿದ್ಧ ನ್ಯಾಶನಲ್ ಫುಟ್ಬಾಲ್ ಲೀಗ್ ನಲ್ಲಿ ಆಡುವುದು, 3. ವರ್ಲ್ಡ್  ಬುಕ್ ಎನ್ಸೈಕ್ಲೋಪೀಡಿಯಾಕ್ಕೆ ಲೇಖನ ನೀಡುವುದು, 4. ಸ್ಟಾರ್ ಟೆಕ್ ಸಿನಿಮಾದ ಕ್ಯಾಪ್ಟನ್ ಕರ್ಕ್ ಆಗುವುದು, 5. ಸ್ಪರ್ಧೆಗಳಲ್ಲಿ ಪ್ರಾಣಿಗಳ ಗೊಂಬೆಗಳನ್ನು ಗೆಲ್ಲುವುದು, 6. ವಾಲ್ಟ್ ಡಿಸ್ನಿ ಕಂಪೆನಿಯಲ್ಲಿ ಯೋಚನಾತಜ್ಞ (ಇಮೇಜಿನೀಯರ್) ಆಗುವುದು.     
ಬೆಳಕು: ಪೋಶ್ಚ್ ತನ್ನ 6ರಲ್ಲಿ 4 ಕನಸುಗಳು ನನಸಾದುದನ್ನು ಕೊನೆಯ ಉಪನ್ಯಾಸದಲ್ಲಿ ವಿವರಿಸಿದರು.   ಪ್ರಾಧ್ಯಾಪಕರಾದ ಬಳಿಕ ನಾಸಾ ಸಂಸ್ಥೆಯು ಅವರ ವಿದ್ಯಾರ್ಥಿಗಳಿಗೆ ಶೂನ್ಯ ಗುರುತ್ವಾಕರ್ಷಣೆಯ ಅನುಭವಕ್ಕೆ ಅವಕಾಶ ಕಲ್ಪಿಸಿದಾಗ, ಪ್ರಾಧ್ಯಾಪಕನೆಂದು ಅವರಿಗೆ ನಿರಾಕರಿಸಿದಾಗ, ವೆಬ್-ಪತ್ರಿಕಾಕರ್ತನಾಗಿ ಆ ಅನುಭವ ಪಡೆದು 1ನೇ ಕನಸು ನನಸುಮಾಡಿಕೊಂಡರು.  ಅಮೇರಿಕಾದ ನ್ಯಾಶನಲ್ ಫುಟ್ಬಾಲ್ ಲೀಗ್ ನಲ್ಲಿ ಆಡುವ ಅವಕಾಶವು ಅವರಿಗೆ ದೊರೆಯದೆ 2ನೇ ಕನಸು ನನಸಾಗದಿದ್ದರೂ, ಫುಟ್ಬಾಲ್ ಕಲಿಕೆಯ ಆರಂಭದಲ್ಲಿ ಕೋಚ್ ನೀಡಿದ ಪಾಠಗಳು ಜೀವನದಲ್ಲಿ ದಾರಿತೋರುವ ಪಾಠಗಳಾದುವು. ಬಾಲ್ಯದಿಂದಲೂ ರಾಂಡಿ ತನ್ನ ಮನೆಯಲ್ಲಿದ್ದ ವರ್ಲ್ಡ್ ಬುಕ್ ಎನ್ಸೈಕ್ಲೋಪೀಡಿಯಾವನ್ನು ಆಗಾಗ ಓದುವ ಹವ್ಯಾಸ ಬೆಳೆಸಿಕೊಂಡಿದ್ದರು, ಮತ್ತು ಅದಕ್ಕಾಗಿ ಲೇಖನ ಬರೆಯುವ ಕನಸು ಕಂಡಿದ್ದರು. ಕಂಪ್ಯೂಟರ್ ವಿಜ್ಞಾನದ 'ವರ್ಚುವಲ್ ರಿಯಾಲಿಟಿ' ಕ್ಷೇತ್ರದಲ್ಲಿ ಗಣನೀಯ ಸಾಧನೆಮಾಡಿದ್ದ ರಾಂಡಿಯವರನ್ನು ಅದರ ಕುರಿತು ಲೇಖನವೊಂದನ್ನು ಬರೆದುಕೊಡುವಂತೆ ಎನ್ಸೈಕ್ಲೋಪೀಡಿಯಾದ ಸಂಪಾದಕರು ವಿನಂತಿಸಿಕೊಂಡಾಗ ಅವರ 3ನೇ ಕನಸು ನನಸಾಯಿತು. ಸ್ಟಾರ್ ಟೆಕ್ ಸಿನಿಮಾಗಳ ತಾರಾನೌಕೆ ಎಂಟರ್ ಪ್ರೈಸ್ ಇದರ ಮುಖ್ಯವೈಮಾನಿಕ ಕ್ಯಾಪ್ಟನ್ ಕರ್ಕ್ ಅವನಂತೆ ತಾನು ವಿಶ್ವದ ನೇತಾರನಾಗಬೇಕೆಂಬ 4ನೇ ಕನಸುಕಂಡಿದ್ದ ರಾಂಡಿ ಮುಂದೆ ಪ್ರೌಢನಾದಾಗ, ಆ ಕನಸು ನನಸಾಗುವುದು ಅಸಂಭವವೆಂದು ಮನಗಂಡು ಅದರ ಬದಲು ಕರ್ಕನ ಪಾತ್ರಧಾರಿ ವಿಲ್ಲಿಯಂ ಶಾಟ್ನರ್ ನನ್ನು ಭೇಟಿಯಾದರೆ ಸಾಕು ಎಂದು ಮಾನಸಿಕ ಒಪ್ಪಂದ ಮಾಡಿಕೊಂಡರು. ಮುಂದೆ ತನ್ನ ಪುಸ್ತಕದಲ್ಲಿ ವರ್ಚುವಲ್-ರಿಯಾಲಿಟಿಯ ಒಂದು ಅಧ್ಯಾಯ ಸೇರಿಸಲು ಶಾಟ್ನರ್ ರಾಂಡಿಯನ್ನು ಭೇಟಿಯಾದಾಗ ಅದು ನನಸಾಯಿತು.  ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ರಾಂಡಿ ಅನೇಕ ಪ್ರಾಣಿಗಳ ಗೊಂಬೆಗಳನ್ನು ಗೆದ್ದುಕೊಂಡು ಬಾಲ್ಯದ 5ನೇ ಕನಸನ್ನು ನನಸು ಮಾಡಿಕೊಂಡರು. ಬಾಲ್ಯದಲ್ಲಿ ಡಿಸ್ನಿಲ್ಯಾಂಡಿನ ಕಿನ್ನರಲೋಕವನ್ನು ನೋಡಿ ಬೆರಗಾಗಿದ್ದ ರಾಂಡಿ ಮುಂದೆ ತಾನು ಕೂಡ ಅಂತಹ ವಿಸ್ಮಯಲೋಕವನ್ನು ಸೃಷ್ಟಿಸಬೇಕೆಂದು ಕನಸುಕಂಡಿದ್ದ. ಪಿ.ಹೆಚ್.ಡಿ. ಪದವಿಯ ಬಳಿಕ ಡಿಸ್ನಿಯಲ್ಲಿ 'ಇಮ್ಯಾಜಿನೀಯರ್' ಹುದ್ದೆಗೆ ಅರ್ಜಿ ಸಲ್ಲಿಸಿದಾಗ, ನಕಾರಾತ್ಮಕ ಉತ್ತರ ಬಂದರೂ ಎದೆಗುಂದದೆ ಅನೇಕ ಪರಿಯಲ್ಲಿ ಪ್ರಯತ್ನಿಸಿ ಕೊನೆಗೆ ಜಯಶೀಲರಾದರು. ರಾಂಡಿಯ ಕೊನೆಯ ಉಪನ್ಯಾಸವನ್ನು ಇಂಟರ್ನೆಟ್ ಮೂಲಕ ಒಂದು ತಿಂಗಳ ಅವಧಿಯಲ್ಲಿ ಮಿಲಿಯಕ್ಕಿಂತಲೂ ಹೆಚ್ಚು ಜನ ನೋಡಿದರು. 
ಚುಟುಕು:
ಕೊನೆಯ ತೀಡಿಗು ಗಂಧ, ಕೊನೆಯ ಹೂವಲು ಚಂದ
ತೆನೆಯ ಕೊನೆಯಲು ಕಾಳು, ಕೊನೆಯ ಕ್ಷಣದಲು ಬಾಳು
ಧ್ವನಿಬೆಳಕು ಕೊನೆವರೆಗು ಬೆಳಗು ತಂತ್ರಜ್ಞ .
-------------------------------------------------------------------------------------------------------------------------------------------


ಬದುಕು: ಬೆಳಕು : ಚುಟುಕು - 54
ಮಾರ್ಟಿನ್ ಲೂಥರ್ ಕಿಂಗ್: ಕನಸುಗಳು
ಬದುಕು: 'ಮಿತ್ರರೇ, ಇಂದು ಕಷ್ಟ ಮತ್ತು ನಿರಾಸೆಗಳಿದ್ದರೂ ನಾನೊಂದು ಕನಸು ಕಾಣುತ್ತಿದ್ದೇನೆ. ಅಮೇರಿಕಾದ ಕನಸಿನಲ್ಲಿ ಭದ್ರವಾಗಿ ಬೇರುಬಿಟ್ಟಿರುವ ಕನಸು ಇದಾಗಿದೆ. ಎಲ್ಲ ಮಾನವರೂ ಸಮಾನರಾಗಿ ಸೃಷ್ಟಿಸಲ್ಪಟ್ಟಿದ್ದಾರೆ ಎಂಬ ಸತ್ಯವು ಸ್ವಯಂವೇದ್ಯವೆಂದು ಎಚ್ಚೆತ್ತ ಈ ದೇಶವು ತಿಳಿದು, ಒಂದು ದಿನ ಆ ನಂಬಿಕೆಯನ್ನು ಕಾರ್ಯರೂಪಕ್ಕೆ ತರುವುದರ ಕನಸು ನಾನು ಕಾಣುತ್ತೇನೆ. ಒಂದು ದಿನ ಜಾರ್ಜಿಯಾದ ಕೆಂಪು ಪರ್ವತಗಳಲ್ಲಿ ಹಿಂದೆ ಗುಲಾಮರಾಗಿದ್ದವರ ಮಕ್ಕಳು ಮತ್ತು ಹಿಂದೆ ಗುಲಾಮಗಿರಿ ನಡೆಸುತ್ತಿದ್ದವರ ಮಕ್ಕಳು ಸೋದರರಂತೆ ಒಂದೇ ಮೇಜಿನ ಸುತ್ತ ಕುಳಿತುಕೊಳ್ಳುವುದರ ಕನಸು ಕಾಣುತ್ತೇನೆ. ಒಂದು ದಿನ ಅನ್ಯಾಯ ಮತ್ತು ಹಿಂಸೆಯ ಬೆಂಕಿಯಲ್ಲಿ ಬೇಯುತ್ತಿರುವ ಮಿಸಿಸಿಪಿ ಪ್ರಾಂತ್ಯವು ಸ್ವಾತಂತ್ರ್ಯ ಮತ್ತು ನ್ಯಾಯದ ಓಯಸಿಸ್ ಆಗುವುದರ ಕನಸು ಕಾಣುತ್ತೇನೆ.
ಯಾವ ದೇಶದಲ್ಲಿ ಜನರನ್ನು ಅವರ ವರ್ಣದ ಬದಲು ಅವರ ಗುಣಮಟ್ಟದ ಮೂಲಕ ಗುರುತಿಸುತ್ತಾರೋ, ಅಂತಹ ದೇಶದಲ್ಲಿ ನನ್ನ ನಾಲ್ಕು ಮಂದಿ ಪುಟ್ಟ ಮಕ್ಕಳು ಮುಂದೆ ಬದುಕುತ್ತಾರೆಂಬ ಕನಸನ್ನು ನಾನು ಕಾಣುತ್ತೇನೆ. ಪುಟ್ಟಪುಟ್ಟ ಕರಿಹುಡುಗ ಮತ್ತು ಕರಿಹುಡುಗಿಯರು ಒಂದು ದಿನ ಪುಟ್ಟಪುಟ್ಟ ಬಿಳಿಹುಡುಗ ಮತ್ತು ಬಿಳಿಹುಡುಗಿಯರ ಕೈಕೈ ಹಿಡಿದುಕೊಂಡು ನಡೆದುಹೋಗುವದನ್ನು ನಾನು ಕನಸುಕಾಣುತ್ತೇನೆ. ಒಂದು ದಿನ ಎಲ್ಲ ಕಂದರಗಳೂ ಮೇಲೆತ್ತಲ್ಪಡುತ್ತವೆ, ಎಲ್ಲ ಗಿರಿಗಳೂ ನೆಲಸಮ ಮಾಡಲ್ಪಡುತ್ತವೆ, ಎಲ್ಲ ಉಬ್ಬುತಗ್ಗಿನ ನೆಲಗಳೂ ಸಮತಟ್ಟಾಗುತ್ತವೆ, ಎಲ್ಲ ಅಂಕುಡೊಂಕಿನ ಸ್ಥಳಗಳೂ ನೇರ ಮಾಡಲ್ಪಡುತ್ತವೆ, ದೇವರ ಮಹಿಮೆಯು ಪ್ರಕಟವಾಗುತ್ತದೆ ಮತ್ತು ಎಲ್ಲ ಜೀವಿಗಳೂ ಅದನ್ನು ನೋಡುತ್ತವೆ ಎಂಬ ಕನಸನ್ನು ನಾನು ಕಾಣುತ್ತೇನೆ.' ಹೀಗೆ ಕನಸುಕಾಣುತ್ತಾ 1963ರಲ್ಲಿ ಮಾತಾಡಿದವರು ಕರಿಯರ ಹಕ್ಕು ಮತ್ತು ಆತ್ಮಗೌರವಕ್ಕಾಗಿ ಸಾತ್ವಿಕ ಹೋರಾಟ ನಡೆಸಿದ ಮಹಾತ್ಮ ಮಾರ್ಟಿನ್ ಲೂಥರ್ ಕಿಂಗ್.       
ಬೆಳಕು: ಕಿಂಗ್ ಅವರ ಮಾತುಗಳನ್ನು ಕೇಳಿದಾಗ ಭಾರತರತ್ನ ಡಾ.ಅಂಬೇಡ್ಕರ್ ಅವರ ಮಾತುಗಳನ್ನು ಕೇಳಿದಂತಾಗುತ್ತದೆ. ಇಬ್ಬರು ಮಹನೀಯರೂ ತಾರತಮ್ಯತೆ, ಅನ್ಯಾಯ, ದಬ್ಬಾಳಿಕೆಗೆ ಗುರಿಯಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದುಬೆಂದಿರುವ ತಮ್ಮ ಬಾಂಧವರ ಸರ್ವತೋಮುಖ ಏಳಿಗೆಯ ಕನಸು ಕಂಡು ಸಾತ್ವಿಕ ಹೋರಾಟ ನಡೆಸಿದ ಯುಗಪುರುಷರು.
 500 ವರ್ಷಗಳ ಬಳಿಕ ಭಾರತದ ಭವಿಷ್ಯ ಏನು ಎಂಬುದರ ಕನಸು ಕಂಡ ಸ್ವಾಮಿ ವಿವೇಕಾನಂದರು ಬೇಲೂರ ಮಠದಲ್ಲಿ ತಮ್ಮ ಶಿಷ್ಯನೊಬ್ಬನಿಗೆ ಹೇಳುತ್ತಾರೆ: '500 ವರ್ಷಗಳ ಬಳಿಕ ಭಾರತವು ಮಹಾನ್ ದೇಶವಾಗುವುದನ್ನು ನಾನು ಕಂಡೆ. ಹಿಂದೆ ಅದು ಪಡೆದಿದ್ದ ಕೀರ್ತಿಯನ್ನು ಮಸುಕುಗೊಳಿಸುವಷ್ಟು ಅಗಾಧ ಪ್ರಮಾಣದ ಕೀರ್ತಿಯನ್ನು ಭಾರತ ಪಡೆಯುವುದನ್ನು ನಾನು ಕಂಡೆ'- ಎಂಬುದಾಗಿ. ಭಾರತದ ಕುರಿತಾಗಿ ಸ್ವಾಮಿ ವಿವೇಕಾನಂದರ ಇನ್ನೊಂದು ಕನಸು ಹೀಗಿತ್ತು: 'ನವಭಾರತ ದೇಶವು ನೇಗಿಲನ್ನು ಹಿಡಿದು ರೈತನ ಗುಡಿಸಲಿನಿಂದ ಮೇಲೇಳಲಿ; ಮೀನುಗಾರರು, ಚಮ್ಮಾರರು, ಮತ್ತು ಗುಡಿಸುವವರ ಗುಡಿಸಲುಗಳಿಂದ ಅದು ಮೇಲೇಳಲಿ; ಅದು ಜೀನಸು ಅಂಗಡಿಯಿಂದ, ಭಕ್ಷ್ಯಗಳನ್ನು ಕರಿದು ಮಾರುವವನ ಕಾವಲಿಯ ಬದಿಯಿಂದ, ಅದು ಮೇಲೇಳಲಿ; ಅದು ಕೈಗಾರಿಕೆಗಳಿಂದ, ಅಂಗಡಿಗಳಿಂದ, ಮತ್ತು ಮಾರುಕಟ್ಟೆಗಳಿಂದ ಮೇಲೇರಲಿ; ಮರದ ತೋಪುಗಳಿಂದ, ಅರಣ್ಯಗಳಿಂದ, ಬೆಟ್ಟ ಮತ್ತು ಪರ್ವತಗಳಿಂದ ನವಭಾರತವು ಮೇಲೇಳಲಿ.' ಭಾರತವು ಹೇಗೆ ಶಕ್ತಿಶಾಲಿಯಾಗಬೇಕೆಂದು ಕನಸು ಕಂಡಿದ್ದ ಗಾಂಧೀಜಿ ಇಂಗ್ಲೇಂಡಿನ ತಮ್ಮ ಮಿತ್ರರೊಬ್ಬರಿಗೆ ಹೀಗೆ ಬರೆಯುತ್ತಾರೆ: 'ನಾನು ಆತ್ಮಶಕ್ತಿ ಅಥವಾ ಪ್ರೀತಿಶಕ್ತಿಯನ್ನು ಭಾರತದಲ್ಲಿ ಜನಪ್ರಿಯಗೊಳಿಸಬೇಕೆಂದಿದ್ದೇನೆ. ಅದನ್ನು ನನ್ನ ಜೀವನದಲ್ಲಿ ಸಾಧಿಸಿತೋರಿಸಲು ನಾನು ಹಗಲಿರುಳು ಪ್ರಯತ್ನಿಸುತ್ತಿದ್ದೇನೆ. ನಾನಿದರಲ್ಲಿ ಜಯಶೀಲನಾದಾಗ ಭಾರತೀಯರೆಲ್ಲರೂ ತಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆಗ ವಿಶ್ವದ ಯಾವ ಶಕ್ತಿಯೂ ಭಾರತವನ್ನು ಎದುರಿಸಿ ಜಯಿಸಲಾರದು.' 
ಬರೀ ಸಣ್ಣ ಸಣ್ಣ ಕನಸುಗಳನ್ನು ಹೊಂದಿರುವುದು ಪಾಪ, ದೇಶದ ಕುರಿತು ಬಹುದೊಡ್ಡ ಕನಸುಗಳನ್ನು ಕಾಣಬೇಕು ಎಂದಿದ್ದರು ರಾಷ್ಟ್ರಪತಿ ಅಬ್ದುಲ್ ಕಲಾಂ. ಇನ್ನೊಂದೆಡೆ ಕಲಾಂ, 'ಶಿಕ್ಷಣ, ಉದ್ಯೋಗ,  ಮತ್ತು ಆರೋಗ್ಯ ವಿಭಾಗಗಳನ್ನು ಒಟ್ಟಾಗಿಸುವುದು, ಮುಖ್ಯ ನದಿಗಳನ್ನು ಜೋಡಿಸಿ ರಾಷ್ಟ್ರೀಯ ಜಲಜಾಲವನ್ನು ಮಾಡುವುದು, ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯನ್ನು ಪಡೆಯುವುದು- ಎರಡು ದಶಕಗಳ ಭಾರತದ ಕನಸಾಗಬೇಕು' ಎಂದಿದ್ದರು. ದೃಷ್ಟಿಶಕ್ತಿ ಇಲ್ಲದೇ ಇರುವುದಕ್ಕಿಂತಲೂ ಹೆಚ್ಚು ಕೀಳಾದ್ದು ಯಾವುದು ಎಂದಾಗ, ಹೆಲೆನ್ ಕೆಲ್ಲರ್ ಹೇಳಿದ್ದು, 'ಕಣ್ಣುಗಳಿದ್ದರು ಕೂಡ ಕನಸು ಕಾಣದಿರುವುದು', ಎಂದು. ಎಲ್ಲ ನನಸುಗಳ ಬೀಜಗಳೇ ಕನಸುಗಳು.   
ಚುಟುಕು:
ಕನಸಿರಲಿ, ಹಸುರಿರಲಿ, ಉಣಿಸು ಸರ್ವರಿಗಿರಲಿ
ಜನಮನಕೆ ಮತಿಯಿರಲಿ, ಯಂತ್ರತಂತ್ರಗಳಿರಲಿ
ಕನಸುಗೈ ವಿಶ್ವಮಾನವತೆ ತಂತ್ರಜ್ಞ .
ಬದುಕು: ಬೆಳಕು: ಚುಟುಕು-53   
ನ್ಯೂಟನ್  ಪ್ರಶ್ನೋತ್ತರಗಳು
ಬದುಕು: ಶರತ್ಕಾಲದ ಒಂದು ದಿನ 23ರ ಹರಯದ ನ್ಯೂಟನ್ ತನ್ನ ತಾಯಿಯ ತೋಟದಲ್ಲಿ   ಸೇಬುಹಣ್ಣಿನ  ಮರದ ಕೆಳಗೆ ಹಸಿರುಹುಲ್ಲಿನ  ಹಾಸಿಗೆಯ ಮೇಲೆ ಮಲಗಿ ಯೋಚನಾಮಗ್ನನಾಗಿದ್ದ. ಆಗ ಇದ್ದಕ್ಕಿದ್ದಂತೆ ಮಾಗಿದ ಸೇಬು ಹಣ್ಣೊಂದು ಮರದಿಂದ ತೊಟ್ಟು ಕಳಚಿ ಅವನ ಮುಂದೆ ಬಿತ್ತು. ಹಿಂದೆ ಅಸಂಖ್ಯ ಜನರ ಮುಂದೆ ಸೇಬು ಅಥವಾ ಇತರ ಹಣ್ಣುಗಳು ತೊಟ್ಟು ಕಳಚಿ ಬಿದ್ದಿರಬಹುದು. ಆದರೆ ಅವರೆಲ್ಲಾ ಬಿದ್ದ ಹಣ್ಣನ್ನು ಹೆಕ್ಕಿ ತಿನ್ನುವ ಯೋಚನೆ ಮಾಡಿರಬಹುದಲ್ಲದೆ, ಅದು ಯಾಕೆ ಕೆಳಗೆ ಬಿತ್ತೆಂದು ಯೋಚಿಸಲು ಅಥವಾ ತಮ್ಮೊಳಗೇನೇ ಪ್ರಶ್ನೆಹಾಕಲು ಹೋಗಿರಲಿಕ್ಕಿಲ್ಲ. ಆದರೆ ನ್ಯೂಟನ್ ಎಲ್ಲರಂತಲ್ಲ. ಸೇಬು ಯಾಕೆ ಕೆಳಗೆ ಬಿತ್ತು ಎಂದು ಅವನು ತನ್ನನ್ನು ತಾನೇ ಪ್ರಶ್ನಿಸಿಕೊಂಡ. ಹಣ್ಣು ಮಾಗಿತ್ತು, ಹಾಗಾಗಿ ದುರ್ಬಲವಾದ ತೊಟ್ಟು ಕಳಚಿ ಅದು ಕೆಳಗೆ ಬಿತ್ತು ಎಂಬ ಉತ್ತರವನ್ನು ಅವನ ಮನಸ್ಸು ಹೇಳಿತು. ಆದರೆ ಈ ಉತ್ತರದಿಂದ ಅವನು ತೃಪ್ತನಾಗಲಿಲ್ಲ; ಅದು ಕೆಳಗೆ ಬೀಳುವ ಬದಲು ಮೇಲಕ್ಕೆ ಅಥವಾ ಅಡ್ಡಕ್ಕೆ ಯಾಕೆ ಹೋಗಲಿಲ್ಲ, ಅಥವಾ ಚಂದ್ರನತ್ತ ಯಾಕೆ ಸಾಗಲಿಲ್ಲ ಎಂದು ಮರುಪ್ರಶ್ನೆ ಹಾಕಿಕೊಂಡ. ಭಾರವಾದ ಎಲ್ಲ ವಸ್ತುಗಳೂ ಭೂಮಿಗೆ ಬೀಳುತ್ತವೆ ನಿಜ; ಆದರೆ ಯಾಕೆ ಬೀಳಬೇಕು? ಯಾಕೆಂದರೆ ಅವು ಭಾರವಾಗಿವೆ; ಆದರೆ ಇದು ಸರಿಯಾದ ಉತ್ತರವಲ್ಲ ಎಂದು ಅವನಿಗೆ ಅನಿಸಿತು. ಹಾಗಾದರೆ ಭಾರ ಮತ್ತು ಹಗುರದ ಅರ್ಥವೇನುಸಾಮಾನ್ಯ ಜನರಾಗಿದ್ದರೆ, ಪ್ರಶ್ನೆಹಾಕುತ್ತಾ ಯಾಕೆ ತಲೆ ಕೆಡಿಸಿಕೊಳ್ಳಬೇಕೆಂದು ಸುಮ್ಮನಾಗುತ್ತಿದ್ದರು. ಆದರೆ ನ್ಯೂಟನ್ ಹಾಗಲ್ಲ. ಹೀಗೆ ಪ್ರಶ್ನೋತ್ತರಗಳ ಸರಪಣಿಯನ್ನು ಮುಂದುವರಿಸುತ್ತಾ ಹೋದ ಅವನು ಹಣ್ಣು ಕೆಳಗೆ ಬಿದ್ದುದರ  ಕಾರಣವನ್ನು   ಹೀಗೆ   ತಿಳಿದುಕೊಂಡ - ಪ್ರತಿಯೊಂದು ವಸ್ತುವೂ ತನ್ನತ್ತ ಇತರ ಎಲ್ಲಾ ವಸ್ತುಗಳನ್ನೂ ಆಕರ್ಷಿಸುತ್ತದೆ; ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುವ ವಸ್ತು  ಹೆಚ್ಚು   ಬಲಯುತವಾಗಿ ಆಕರ್ಷಿಸುತ್ತದೆ; ವಸ್ತು  ಹತ್ತಿರದಲ್ಲಿದ್ದರೆ  ಅದು  ಹೆಚ್ಚು ಬಲಯುತವಾಗಿ  ಆಕರ್ಷಿಸುತ್ತದೆ; ಇತರ ವಸ್ತುಗಳನ್ನು ಹೆಚ್ಚು ಬಲಯುತವಾಗಿ ಆಕರ್ಷಿಸುವ ವಸ್ತುವು ಹೆಚ್ಚು ಭಾರವಾಗಿರುತ್ತದೆ; ಭೂಮಿಯು ಸೇಬಿಗಿಂತ ಕೋಟಿಗಟ್ಟಲೆ ಹೆಚ್ಚು ಭಾರವಾಗಿರುವುದರಿಂದ, ಸೇಬು ಭೂಮಿಯನ್ನು ಆಕರ್ಷಿಸುವುದಕ್ಕಿಂತಲೂ ಷಿ ಕೋಟಿಗಟ್ಟಲೆ   ಹೆಚ್ಚು ಬಲವಾಗಿ ಭೂಮಿಯು ಸೇಬನ್ನು ಆಕರ್ಷಿಸುತ್ತದೆ; ಭೂಮಿಯು ತನ್ನ ಮೇಲಿರುವ ಅಥವಾ ತನ್ನ ಬಳಿಯಿರುವ ವಸ್ತಗಳಿಗಿಂತ ಕೋಟಿಗಟ್ಟಲೆ ಹೆಚ್ಚು ಭಾರವಾಗಿರುವುದರಿಂದ ಅದು ಅವುಗಳನ್ನೆಲ್ಲಾ ತನ್ನತ್ತ  ಆಕರ್ಷಿಸುತ್ತದೆ; ಈ ಕಾರಣಕ್ಕಾಗಿ ವಸ್ತುಗಳು ಮೇಲಿಂದ ಕೆಳಗೆ ಚಲಿಸಿ ಭೂಮಿಯ ಮೇಲೆ ಬೀಳುತ್ತವೆ. ಒಂದು ವಸ್ತುವು ಇತರ ಎಲ್ಲಾ ವಸ್ತುಗಳನ್ನೂ ತನ್ನತ್ತ ಆಕರ್ಷಿಸುವುದು ನಮಗೆ ಗೊತ್ತಿದೆ; ಆದರೆ ಆಕರ್ಷಿಸುವ ಕಾರಣ ಮಾತ್ರ ನಮಗೆ ತಿಳಿದಿಲ್ಲ; ಆದರೆ ಈ ಆಕರ್ಷಕ ಶಕ್ತಿಗೆ ಒಂದು ಹೆಸರು ಕೊಡಲು ನಮಗೆ ಸಾಧ್ಯವಿದೆ; ಆ ಹೆಸರೇ ಗುರುತ್ವಾಕರ್ಷಣ ಶಕ್ತಿ. ಈ ಗುರುತ್ವಾಕರ್ಷಣ ಶಕ್ತಿಯ ಕಾರಣದಿಂದಾಗಿ  ಸೇಬು  ಕೆಳಗೆ  ಬೀಳುತ್ತದೆ, ವಸ್ತುಗಳು   ಭಾರವನ್ನು   ಹೊಂದಿರುತ್ತವೆ, ಆಯಾ ವಸ್ತುಗಳು ಆಯಾ ಸ್ಥಾನದಲ್ಲಿರುತ್ತವೆ, ಮತ್ತು ಚಂದ್ರ ಭೂಮಿಯನ್ನು ಹಾಗೂ ಭೂಮಿ ಸೂರ್ಯನನ್ನು ಸುತ್ತುತ್ತಿರುತ್ತದೆ. ಹೀಗೆ ಸೇಬು ಮೇಲಿಂದ  ತನ್ನ   ಬಳಿ   ಬಿದ್ದ   ಬಳಿಕ, ಪ್ರಶ್ನೋತ್ತರಗಳ ಸರಪಣಿಯನ್ನು ಮುಂದುವರಿಸಿ, ಸರ್ ಐಸಾಕ್ ನ್ಯೂಟನ್ (1642-1727) ನಿಸರ್ಗದ ನಿತ್ಯಸತ್ಯವೊಂದನ್ನು   ಅರಿತುಕೊಂಡರು.
ಬೆಳಕು: ಪ್ರಶ್ನಿಸುವುದು, ಉತ್ತರಿಸುವುದು, ಮತ್ತೆ ಪ್ರಶ್ನಿಸುವುದು, ಮತ್ತೆ ಉತ್ತರಿಸುವುದು,...ಇದನ್ನು ಸರಪಣಿಯಂತೆ  ತರ್ಕಬದ್ಧವಾಗಿ ಮುಂದುವರಿಸುವುದು ಸತ್ಯವನ್ನು ಅರಿಯುವ ಒಂದು ವಿಧಾನ. ಇದು ವಿಜ್ಞಾನಕ್ಕೆ ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಇದನ್ನೇ ಕುವೆಂಪು ಸೂತ್ರರೂಪದಲ್ಲಿ'ಪ್ರಶ್ನೆಯಿಂದ ಉತ್ತರಕ್ಕೆ, ಉತ್ತರದಿಂದ ಪ್ರಶ್ನೆಗೆ, ಉಭಯ ಮಧ್ಯೆ ಚಲಿಪ  ವಿದ್ಯೆ   ಪೂರ್ಣೆ ಶೂನ್ಯೆ   ಕುಂಡಲಿನಿ' ಹೇಳಿ  ವಿದ್ಯೆಯ ದಾರಿಯನ್ನು ಚಿತ್ರಿಸಿದ್ದಾರೆ. ತಾನು ಹೇಳಿದುದನ್ನು ಪ್ರಶ್ನಿಸದೆ, ಪರೀಕ್ಷಿಸದೆ ಸ್ವೀಕರಿಸಬೇಡಿ ಎಂದಿದ್ದಾರೆ ಬುದ್ಧ ಮತ್ತು ರಾಮಕೃಷ್ಣ ಪರಮಹಂಸರು. ನಾವು ಒಂದು ಪ್ರಶ್ನೆಯತ್ತ ಬಂದಾಗ ಉತ್ತರ ಬಳಿಯಲ್ಲೇ ನಿಂದಿರುತ್ತದೆ ಎಂದಿದ್ದಾನೆ ಎಮರ್ಸನ್. ಒಬ್ಬ ವಿವೇಕಿಯು ಕೇಳುವ ಪ್ರಶ್ನೆಯು ಅರ್ಧ ಉತ್ತರವೇ ಆಗಿರುತ್ತದೆ ಎಂದಿದ್ದಾನೆ ಸಾಲೊಮನ್. ಸಾವಿರಾರು ಬಗೆಯ ಕಾರ್ಯಗಳನ್ನು ಮಾಡಬಲ್ಲ ಕಂಪ್ಯೂಟರನ್ನು 'ಪ್ರಶ್ನೆಗಳನ್ನು ಅರಸುವ ಉತ್ತರ' ಎಂದು ಹೊಗಳಲಾಗುತ್ತದೆ. ವಿಜ್ಞಾನ ತಂತ್ರಜ್ಞಾನದಲ್ಲಿ ನಮ್ಮ ಸಾಧನೆ ಅಪಾರ. ಆದರೆ ಆಂತರಿಕ ಕ್ಷೇತ್ರದಲ್ಲಿ ನಾವು ಮುಂದಿದ್ದೇವೆಯೆ? ನಮ್ಮ ಅಸ್ತಿತ್ವದ ಉದ್ದೇಶವೇನು? ನಮ್ಮ ಜೀವನದ ಗುರಿಯೇನು? ಧರ್ಮದ ಮೂಲ ಉದ್ದೇಶವೇನು? ಇಂತಹ ಪ್ರಾಮುಖ್ಯ ಪ್ರಶ್ನೆಗಳನ್ನು ಕೇಳದೆ, ಅಂತರ್ಜ್ಞಾನದಲ್ಲಿ ತೀರ ಹಿಂದಿರುವ ವಿಶ್ವದ ಸ್ಥಿತಿಯನ್ನು, 'ನಮ್ಮಲ್ಲಿ ಎಲ್ಲಾ ಉತ್ತರಗಳೂ ಇವೆ; ಆದರೆ ಮುಖ್ಯವಾಗಿ ಪ್ರಶ್ನೆ ಏನು ಎಂಬುದೇ ನಮಗೆ ಮರೆತುಹೋಗಿದೆ' ಎಂದು ವಿವರಿಸಿದ್ದಾರೆ ಆಧುನಿಕ  ಚಿಂತಕರೊಬ್ಬರು.

ಚುಟುಕು:
ಪ್ರಶ್ನೆಗುತ್ತರ  ಸಿಗಲು, ಬೆನ್ನಲ್ಲೆ  ಇಡು  ಪ್ರಶ್ನೆ;
ಜ್ಞಾನದೇಗುಲವಿರುವ  ಕಡಲಾಚೆ  ತೀರಕ್ಕೆ
ಪ್ರಶ್ನೋತ್ತರದ  ನೌಕೆ  ನಡೆಸು  ತಂತ್ರಜ್ಞ .

No comments:

Post a Comment